ಎಲ್ಲ ಮರೆತಿರುವಾಗ...

Friday, August 17, 2007

ಕವಲು ದಾರಿಯಲ್ಲಿ...

ಯಾರು ಬರೆದರೋ, ಆ ಕೆಂಪು ನೀಲಿ ಬೋರ್ಡಿನ ಕೆಳಗೆ "A lot can happen over a Coffee" ಅಂತ.
ಅಂದು ನಿನಗಿಂತ ಮೊದಲು ಕಾಫಿ ಡೇಯಲ್ಲಿ ಕುಳಿತವನಿಗೆ ಬಂದ ಯೋಚನೆ ಇದು. ಆ ಕಾಫಿಯ ಸವಿ ಯಾರ ಬದುಕಿಗೆ ಅರ್ಥ ತಂದುಕೊಟ್ಟಿತೋ ಗೊತ್ತಿಲ್ಲ, ಆದರೆ ನನ್ನ ನಿನ್ನ ನಡುವೆ ಏನೂ ಘಟಿಸಲೇ ಇಲ್ಲವಲ್ಲೇ.
ಅಂದು ಇಳಿ ಸಂಜೆಯಲ್ಲಿ ನನ್ನ ಮೊಬೈಲ್ ರಿಂಗಿನ ಜೊತೆ ನಿನ್ನ ಹೆಸರು ಕಾಣಿಸಿದಾಗಲೇ ಅಂದುಕೊಂಡೆ ನಿನ್ನ ಈ ಕರೆ ಸಾಂಪ್ರದಾಯಕ ವಿದಾಯಕ್ಕೆಂದೆ. ಆದರೆ ಕುಳಿತು ನಿರ್ಧರಿಸಲು ಉಳಿದಿತ್ತಾದರೂ ಏನು?
ಜೀವನದ ರಸ್ತೆಯ ಕೊನೆಯಂಚಿನವರೆಗೆ ಅಥವಾ ನಾವಿಬ್ಬರೂ ಇರುವವರೆಗೆ ಜೊತೆಜೊತೆಯಾಗಿ ಕೈಹಿಡಿದು ನಡೆಯೋಣವೆಂದು ಹೊರಟವರು ನಾವು. ಯಾಕೋ ಪಯಣ ಆರಂಭಿಸುವ ಮೊದಲೇ ನಿನ್ನ ಮುಖದಲ್ಲಿ ಬೆವರಿನ ಸೆಲೆಯಿತ್ತು.
ಕಲ್ಲು ಮುಳ್ಳುಗಳ ರಸ್ತೆ ನನಗಲ್ಲ, ಆದರೆ ನೀನು ಮಾತ್ರ ಬೇಕು, ರಸ್ತೆ ಬದಲಿಸೋಣ ಅಂದು ಬಿಟ್ಟೆ.ಅದು ಹೇಗಾದೀತು? ಕಲ್ಲಿರಲಿ ಮುಳ್ಳಿರಲಿ ಅದು ನನ್ನ ಕನಸಿನರಮನೆಗೆ ಕೊಂಡೊಯ್ಯುವ ದಾರಿ. ಬಿಟ್ಟು ಹೇಗೆ ಬರಲಿಕ್ಕಾದೀತು ಹೇಳು.
ನನಗೆ ನೀನು ಬೇಕಿತ್ತು, ನಿನಗೆ ನಾನು. ರಸ್ತೆಗಳ ಗೊಡವೆ ನಮಗೆ ಬೇಕಿರಲಿಲ್ಲ. ಆದರೆ ನಿಂತಲ್ಲೇ ನಿಲ್ಲಲಾಗದಲ್ಲಾ? ನೀನೇ ಹೇಳಿದ್ದು, ನಾನು ಪಕ್ಕದ ದಾರಿಯಲ್ಲಿ ಬರುತ್ತೇನೆ, ಜೊತೆಯಾಗಿಯೇ ಎಂದು. ಸರಿ ದಾರಿ ಬೇರೆಯಾದರೇನು ಜೊತೆಜೊತೆಯಾಗಿಯೇ ಹೋಗೋಣ ಕೈಕೈ ಹಿಡಿದು ನಡೆಯಲಾಗದು, ಆದರೆ ಕೈಬಿಟ್ಟು ನಡೆಯ ಬೇಡ ಅಂದಿದ್ದೆ ನಾನು.
ನಾನು ನಂಬಿದೆ, ಎಷ್ಟೋಂದು ಹಗಲಿರುಳುಗಳು ಜೊತೆಜೊತೆಯಲ್ಲಿ ಬೇರೆ ಬೇರೆ ದಾರಿ, ಒಂದೇ ಗಮ್ಯ.
ಮೊಂದೊಂದು ತಿರುವಿನಲ್ಲಿ ಮತ್ತೆ ಕೈ ಹಿಡಿಯುತ್ತೀಯ ಎಂಬ ಪುಟ್ಟ ಆಸೆಯೊಂದೇ ಹೆಜ್ಜೆಯಿಡುವಂತೆ ಪ್ರೆರೇಪಿಸುತ್ತಿದ್ದುದು. ಪ್ರತಿಯಿರುಳೂ ನನಗೆ ಕಳವಳ, ಕತ್ತಲ ದಾರಿಯಲ್ಲಿ ಎಲ್ಲಿ ಕಳೆದುಹೋದೆಯೋ ಎಂದು. ನನ್ನ ಹೆಜ್ಜೆ ಬಿರುಸಾದರೂ ನಿನ್ನ ಹೆಜ್ಜೆ ನಿಧಾನವಾದರೂ ಕಳೆದು ಹೊಗುತ್ತಿದ್ದುದು ನಾವಿಬ್ಬರು. ಬರುವ ನಾಳೆಯಲ್ಲಿ ಭರವಸೆಯಿಟ್ಟು ಇಡುವ ಹೆಜ್ಜೆಗೆ ಆನೆ ಬಲ.
ಬದುಕಿನ ಯಾವುದೋ ತಿರುವಿನಲ್ಲಿ ನೀನು ರಸ್ತೆ ಬದಲಿಸಿದ್ದು ನನಗೆ ಅರಿವಾಗಲೇ ಇಲ್ಲ. ಒಂದು ಸುಂದರ ಮುಂಜಾವಿನಲ್ಲಿ ಕಣ್ತೆರೆದವನಿಗೆ ತಿಳಿದಿದ್ದು ಪಕ್ಕದ ರಸ್ತೆಯಲ್ಲಿ ನೀನಿಲ್ಲ. ನನಗೆ ಗೊತ್ತು ನಿನ್ನ ಹೆಜ್ಜೆಯ ಗತಿ, ನನಗಿಂತ ಮುಂದೆ ಹೋಗಿರಲಾರೆ, ನಿನ್ನವು ಪುಟ್ಟ ಪುಟ್ಟ ಹೆಜ್ಜೆಗಳು. ಎಲ್ಲದರೂ ಮುನಿಸಿಕೊಂಡು ಕುಳಿತಿರಬಹುದೇ ಎಂದು ಅದೇ ತಿರುವಿನಲ್ಲಿ ಕಾದು ಕುಳಿತವನಿಗೆ ನೀನು ಕಾಣಿಸಿದ್ದು ಬಹು ದಿನಗಳ ನಂತರ.
ನಿನ್ನ ನಡಿಗೆ ನಿಧಾನವಾಗಿದ್ದರೆ, ಮುನಿಸಿಕೊಂಡು ಎಲ್ಲೋ ಕುಳಿತಿಕೊಂಡಿದ್ದರೆ ಬೇಸರವಿರಲಿಲ್ಲ. ಅಂದು ನೀನು ಒಬ್ಬಳೆ ಬರಲಿಲ್ಲ, ಜೊತೆಯಲ್ಲಿ ಅವನಿದ್ದ.
ಇನ್ನು ಅವನಿರುವವರೆಗೆ ನಿನ್ನಜೊತೆ ನಡೆಯಲಾರೆ, ನಿನ್ನ ರಸ್ತೆಯಲ್ಲಿಯೂ ಕೂಡಾ. ಆದರೆ ನೀನಿಲ್ಲದೇ ನಾನೆಡೆಯಲಾರೆ ನನ್ನ ರಸ್ತೆಯಲ್ಲಿಯೂ. ನಿರ್ಧರಿಸಿಯಾಗಿದೆ ನೀನು ನನಗೆ ಬೇಕೇ ಬೇಕು. ನನ್ನದೇ ಕಲ್ಲು ಮುಳ್ಳು ರಸ್ತೆಯಲ್ಲಿ ನಿನಗಿಂತ ನಿಧಾನವಾದರೂ ಕೂಡಾ ನಡೆದು ಬಂದೇ ಬರುತ್ತೇನೆ, ನೀನು ಮುಂದಾವುದೋ ತಿರುವುನಲ್ಲಿ ನನಗಾಗಿ ಕಾಯಬಹುದು ಎಂಬ ಪುಟ್ಟ ಹಣತೆ ಹೊತ್ತಿಸಿಕೊಂಡು. ನನಗೆ ಗೊತ್ತು ನೀನು ಅವನೊಂದಿಗೆ ಬಹಳ ದೂರ ನಡೆಯಲಾರೆ, ನಿನ್ನ ಪ್ರೀತಿಯ ಮೇಲೆ ಕಿಂಚಿತ್ತೂ ಅನುಮಾನವಿಲ್ಲ, ಆದರೆ ಅವನ ದ್ರೋಹದ ಬಗ್ಗೆ ವಿಶ್ವಾಸ ಅಷ್ಟೆ.
ನನ್ನ ದಾರಿ ನಿನ್ನ ದಾರಿಯಹಾಗೆ ಸುಗಮವಲ್ಲ, ಅದಕ್ಕೇ ಅಲ್ಲವೇ ನೀನು ಪಕ್ಕದ ದಾರಿ ಆಯ್ದುಕೊಂಡದ್ದು. ತಡವಾಗಿಯಾದರೂ ಬಂದೇ ಬರುತ್ತೇನೆ ಬದುಕಿನ ಆ ತಿರುವಿಗೆ.
ನನಗಾಗಿ ನೀನು ಕಾಯಬೇಕಷ್ಟೆ. ಒಬ್ಬಳೇ..

3 comments:

Ganesha Lingadahalli said...

ಚಂದ ಇದ್ದು.. ಹಿಂಗೇ ಬರಿತಾ ಇರು..
"ನನಗೆ ಗೊತ್ತು ನೀನು ಅವನೊಂದಿಗೆ ಬಹಳ ದೂರ ನಡೆಯಲಾರೆ, ನಿನ್ನ ಪ್ರೀತಿಯ ಮೇಲೆ ಕಿಂಚಿತ್ತೂ ಅನುಮಾನವಿಲ್ಲ, ಆದರೆ ಅವನ ದ್ರೋಹದ ಬಗ್ಗೆ ವಿಶ್ವಾಸ ಅಷ್ಟೆ."
negetive optimism?? ಹ್ಹೆಹ್ಹೆಹ್ಹೆ..

ಸಿಂಧು sindhu said...

ಚನ್ನಾಗಿ ಬರೆದಿದ್ದೀರಿ.

ಕಾಯುವ ಬಗ್ಗೆ ನನ್ನ ಅಭಿಪ್ರಾಯ ಬೇರೆ. ಹೊರಳುದಾರಿ ಮತ್ತು ವಿದಾಯಗಳ ಬದುಕಿನ ಪಯಣ ನನಗೆ ಕಲಿಸಿದ್ದು ಕಠಿಣ ಪಾಠ. ಹೊರಳಿನಿಂತವರನ್ನ ತಡೆಯಬಹುದು ಪ್ರೀತಿಯಿಂದ ಆರ್ದ್ರತೆಯಿಂದ ಕೇಳಿಕೊಂಡು. ಆದರೆ ಹಿಡಿದಿಡಲಾಗುವುದಿಲ್ಲ. ಇಬ್ಬರಿಗೂ ಆ ಇನ್ನೊಂದು ಸಾಧ್ಯತೆಯೇ ಸರಿಯೆನ್ನಿಸುವ ಹಳಹಳಿಕೆಯಾಗಿಬಿಡುತ್ತದೆ.

ನಿಮ್ಮ ಅಭಿವ್ಯಕ್ತಿ, ಸರಳ ಭಾಷೆ ಮತ್ತು ಹೂವರಳಿದಂತೆ ಒಡಮೂಡಿರುವ ಭಾವಬಾಂಧವ್ಯ ತುಂಬ ಇಷ್ಟವಾಯಿತು.

ಇನ್ನೂ ಬರೀರಿ. ಸುತ್ತಲ ಎಲ್ಲ ವಿಷಯಗಳ ಬಗ್ಗೆ. ಎಲ್.ಡಿ. ಕೋಟ್ ಮಾಡಿರುವ ಸಾಲು ನನಗೂ ತುಂಬ ಹಿಡಿಸಿತು.

ರಂಜನಾ ಹೆಗ್ಡೆ said...

ತುಂಬಾ ತುಂಬಾ ಚನ್ನಾಗಿ ಬರೆದಿದ್ದಿರಾ.

ನಿಮ್ಮ ಕಾಯುವಿಕೆಗೆ ಒಳ್ಳೆ ಪ್ರತಿಫಲ ಸಿಗಲಿ.
"ಬಾಳ ದಾರಿಗಳು ಬೇರೆಯಾದರು ಚಂದಿರ ಬರುವನು ನಮ್ಮ ಜೊತೆ" ಲೈನ್ ನೆನಪಾಯಿತು.

ಸಿಂಧು ಬರೆದ ಹಾಗೆಯೇ ಕಾಯುವಿಕೆಗೆ ನನ್ನಲ್ಲಿಯೂ ಬೆರೆಯದೇ ಅಭಿಪ್ರಾಯವಿದೆ. ಜೀವನವೆನ್ನುವುದು ಸಿನೇಮಾ ಅಲ್ಲಾ.

"सबर का फल मीटा हॊता है"
"ನನಗೆ ಗೊತ್ತು ನೀನು ಅವನೊಂದಿಗೆ ಬಹಳ ದೂರ ನಡೆಯಲಾರೆ, ನಿನ್ನ ಪ್ರೀತಿಯ ಮೇಲೆ ಕಿಂಚಿತ್ತೂ ಅನುಮಾನವಿಲ್ಲ, ಆದರೆ ಅವನ ದ್ರೋಹದ ಬಗ್ಗೆ ವಿಶ್ವಾಸ ಅಷ್ಟೆ."
ನಂಗೂ ಈ ಲೈನ್ ತುಂಬಾ ಇಷ್ಟ ಆತು.