ಎಲ್ಲ ಮರೆತಿರುವಾಗ...

Friday, November 30, 2007

ಅಂತರ

ಬದುಕಿನ ಬದಲಾವಣೆಗಳು ಅವಶ್ಯಕ.ಅದು ಭಯ ಹುಟ್ಟಿಸುವಂತಿರದಿದ್ಹರೆ, ಗಂಟಲ ಪಸೆ ಆರಿಸುವಂತಿರದಿದ್ಹರೆ ಮಾತ್ರ ಒಪ್ಪಿಕೊಳ್ಳಬಹುದು.ಬದಲಾವಣೆ ಅಷ್ಟೂಂದು ಕ್ರೂರವಿದ್ಹರೆ,ಬದಲಾವಣೆಗೆ ದಿಕ್ಕಾರವಿರಲಿ. ನಿಂತ ನೀರಲ್ಲೆ ಬದುಕೋಣ.

ಕಳೆದ ದೀಪಾವಳಿಗೂ ಬರುವ ದೀಪಾವಳಿಗೂ ಎಷ್ಟೊಂದು ಅಂತರ.ಕಳೆದ ಹನ್ನೆರಡು ಮಾಸಗಳು ಬದುಕಿನ ಬಣ್ಣವನ್ನೇ ಬದಲಾಯಿಸಿಬಿಟ್ಟಿದೆ.ಮುರಿದ ಕನಸುಗಳು ಬದುಕಿನ ಗುರಿಯನ್ನೆ ಬದಲಾಯಿಸಲು ಹೊರಟಿವೆ.ನಡೆದು ಬಂದ ದಾರಿ ನಮ್ಮದಲ್ಲವೇನೊ ಎಂಬತೆ ತಿರುಗಿ ಮತ್ಹೆಲ್ಲೊ ಹೊರಟಿದ್ಹೇವೆ ಹತ್ಹಾರು ವರುಷಗಳು ಜೊತೆಗಿರುತ್ಹೆನೆ ಎಂದು ಬಂದ ನೀನು ಕಳೆದ ದೀಪಾವಳಿಯ ಹಣತೆಗಳು ಆರಿ,ಈ ದೀಪಾವಳಿಯ ಹಣತೆಗಳು ಹೊತ್ಹುವ ಮುನ್ನವೆ
ಯಾರದೋ ಮನೆಯ ನಂದಾ ದೀಪ.ಕರಾರುಗಳೇ ಇಲ್ಲದೆ ಜೀವನದ ಹೆಜ್ಜೆ ಹೆಜ್ಜೆಗೂ ಸಾತ್ ನೀಡಿದ ಅಪ್ಪ,ಹೋಗಿ ಬರುತ್ಹೇನೆ ಎಂದು ಕೂಡ ಹೇಳದೆ ಹೊರಟು ಹೊಗಿದ್ಹಾರೆ.


ನಾಳೆ ಬೆಳಗಾದರೆ ದೀಪಾವಳಿ.ಬರುವ ಬೆಳಗನ್ನು ಹಿಡಿದಿಡಲಾರೆ.ಹಿಡಿದಿಡುವಂತಿದ್ಹರೆ ಚೆನ್ನಗೀತ್ಹು.ಇಂದು ಸಮ್ಜೆ ಒಲೆಯ ಮೇಲಿಟ್ಟ ಕಂದು ಹಸುವಿನ ಹಾಲು ಉಕ್ಕುವ ಮುನ್ನ ಅಮ್ಮನ ಕಂಗಳಲ್ಲಿ ಗಂಗೆ ಉಕ್ಕಿರುತ್ಹಾಳೆ.ಕಳೆದ ಇಪ್ಪತ್ಹಾರು ವರುಷಗಳಲ್ಲಿ ಅಪ್ಪನಿಲ್ಲದೆಯೆ ಆಚರಿಸಬೇಕಿರುವ ಮೊದಲ ದೀಪಾವಳಿ. ನಿನಗೂ ಅಷ್ಟೆ ಅಲ್ಲವೆ! ಹಬ್ಬದ ಮುಂಜಾವಿನಲ್ಲಿ ಸ್ನಾನ ಮಾಡಿಕೊಂಡು, ಹಬ್ಬಕ್ಕೆ ಹೊಸದಾಗಿ ಗಂಡ ತಂದ ಕಡುಗೆಂಪು ಸೀರೆಯನ್ನು
ಅಲ್ಮೆರಾದಿಂದ ತೆಗೆಯುವಾಗ,ಇನ್ನೆಂದೂ ಉಡಲೆಬಾರದು ಎಂದು ಸೀರೆಯ ಸಾಲಿನಲ್ಲಿ ಕೊನೆಗೆ ಇಟ್ಟ ಆ ಕಪ್ಪು ಹೂವಿನ ಗುಲಾಬಿ ಬಣ್ಣದ ಸೀರೆ ಕರುಳಲ್ಲಿ ಸಣ್ಣ ನಡುಕ ಹುಟ್ಟಿಸದೇ ಇದ್ಹೀತಾ...?ನನಗೂ ಗೊತ್ಹು ಗುಲಾಬಿ ಕೆಂಪಾಗಿದೆ.ನಿನಗೆ ಗಂಡನಿದ್ಹಾನೆ ಪೂಜೆಯ ಪರಿಕರ ಜೋಡಿಸಿಕೊಡಲು,ಕಳೆದ ದೀಪಾವಳಿಯಲ್ಲಿಲ್ಲದವನು.ನನಗೂ ಅಮ್ಮನಿದ್ಹಾಳೆ ಜೊತೆಯಾಗಿ ಪ್ರಾರ್ಥಿಸಲು.ನಾನು ಭುವಿಗೆ ಕಾಲಿಟ್ಟಾಗ ಜೊತೆಗಿದ್ಹವಳು.

ಇಂದು ,ಕಳೆದ ದೀಪಾವಳಿಯಲ್ಲಿದ್ಹ ನಾನು ನಿನ್ನ ಜೊತೆಯಲ್ಲಿಲ್ಲ,ಅಮ್ಮನ ಜೊತೆಗೆ ಅಪ್ಪನೂ ಕೂಡ.ಅಪ್ಪನಿಗೆ ಸಾವು ಬಂದು ಕದ ತಟ್ಟಿತ್ಹು.ನೀನು ಕದ ತೆರೆದು ಹೊರಟು ಹೋದೆ.

ಆದರೆ ಅಮ್ಮನ ಕಣ್ನಂಚಿನ ನೀರಿಗೂ, ನಿನ್ನ ಒಡಲಾಳದ ನಡುಕಕ್ಕು ಬಹಳ ಅಂತರವಿದೆ ಗೆಳತಿ.ದುರ್ಭರ ಬದುಕಿನ ಇಪ್ಪತ್ಹಾರು ವರುಷಗಳು ಯಾವುದೇ ಕರಾರಿಲ್ಲದೆ ನೀಡಿದ ಸಾತಗೆ ಕ್ರತಘ್ನತೆ,ನೀವಿಲ್ಲದೆ ನಾನು ನಡೆಸುವ ಅಚರಣೆ ಒಂದು ಆಚರಣೆಯಾ? ಏಂಬ ಪ್ರಶ್ನೆ, ಸಾತ್ ಇಲ್ಲದೆಯೂ ಹೆಜ್ಜೆ ತಪ್ಪದೆ ನಡೆಯಲು ಕಲಿಸಿದ್ಹಕ್ಕೆ ಧನ್ಯತೆ; ಐದಾರು ವರುಷಗಳ
ಹಿಂದೆಯೇ ಬಂದು ಕದ ತಟ್ಟಿದ್ಹ ಯಮನನ್ನ ಬಾಗಿಲಲ್ಲೆ ಕಾಯಿಸಿದ ಸಾಮಾಧಾನ,ಹೀಗೆ ಭಾವನದಿಗಳು ಬಂದು ಸೇರುವ ಪುಣ್ಯ ತೀರ್ಥ ಆ ಕಣ್ಣೀರು.

ನಿನ್ನ ಕರುಳಿನ ನಡುಕದ ಅರ್ಥ ನೀನೆ ಹುಡುಕಲಾರೆ. ಕಳೆದು ಹೋದ ಪ್ರೀತಿಯ ಮರುಭೂಮಿ ಹುಟ್ಟಿಸುವ ಭಯ,ಜೀವನದ ಮಹತ್ಹರ ತಿರುವಿನಲ್ಲಿ ದುಡಿಕಿಬಿಟ್ಟೆನಾ! ಎಂಬ ಅನುಮಾನ,ಅವನು ನಾನಿಲ್ಲದೆ ಇನ್ನೂ ಹೇಗಿರಬಹುದು? ಎಂಬ ಕುತೂಹಲ,ಗುಲಾಬಿ ಬಣ್ಣದ ಪ್ರಶಾಂತತೆ ಕಡುಗೆಂಪಿನ ಅಬ್ಬರದಲ್ಲಿಲ್ಲವಲ್ಲ ಎಂಬ ಅಸಮಾದಾನ..,ಹೀಗೆ ಹುಚ್ಹು ಹೊಳೆಗಳು ಸೇರಿ ಹುಟ್ಟಿಸಿದ ಪ್ರವಾಹ.

ಉಳಿದವುಗಳು ಏನೇ ಇರಲಿ ಈ ದೀಪಾವಳಿ ಅಮ್ಮನ ಬದುಕಿನಲ್ಲಿ ಶಾಂತಿ ನೆಮ್ಮದಿ ತರಲಿ,ಅದು ಹಾಗೆಯೆ ಇರಲಿ.ಸೀರೆಯ ಬಣ್ಣ ಯಾವುದಾದರೇನು,ಉಡುವ ಮನಸು ನಿನಗಿರಲಿ.ಗುಲಾಬಿಯೊ.... ಕೆಂಪೊ... ಬಣ್ಣ ಮಾಸದಿರಲಿ.ಮುಂದಿನ ದೀಪಾವಳಿಗೆ ತರುವ ಸೀರೆಯ ಬಣ್ಣವೂ ಕಡುಗೆಂಪೇ ಇರಲಿ.