ಎಲ್ಲ ಮರೆತಿರುವಾಗ...

Friday, November 30, 2007

ಅಂತರ

ಬದುಕಿನ ಬದಲಾವಣೆಗಳು ಅವಶ್ಯಕ.ಅದು ಭಯ ಹುಟ್ಟಿಸುವಂತಿರದಿದ್ಹರೆ, ಗಂಟಲ ಪಸೆ ಆರಿಸುವಂತಿರದಿದ್ಹರೆ ಮಾತ್ರ ಒಪ್ಪಿಕೊಳ್ಳಬಹುದು.ಬದಲಾವಣೆ ಅಷ್ಟೂಂದು ಕ್ರೂರವಿದ್ಹರೆ,ಬದಲಾವಣೆಗೆ ದಿಕ್ಕಾರವಿರಲಿ. ನಿಂತ ನೀರಲ್ಲೆ ಬದುಕೋಣ.

ಕಳೆದ ದೀಪಾವಳಿಗೂ ಬರುವ ದೀಪಾವಳಿಗೂ ಎಷ್ಟೊಂದು ಅಂತರ.ಕಳೆದ ಹನ್ನೆರಡು ಮಾಸಗಳು ಬದುಕಿನ ಬಣ್ಣವನ್ನೇ ಬದಲಾಯಿಸಿಬಿಟ್ಟಿದೆ.ಮುರಿದ ಕನಸುಗಳು ಬದುಕಿನ ಗುರಿಯನ್ನೆ ಬದಲಾಯಿಸಲು ಹೊರಟಿವೆ.ನಡೆದು ಬಂದ ದಾರಿ ನಮ್ಮದಲ್ಲವೇನೊ ಎಂಬತೆ ತಿರುಗಿ ಮತ್ಹೆಲ್ಲೊ ಹೊರಟಿದ್ಹೇವೆ ಹತ್ಹಾರು ವರುಷಗಳು ಜೊತೆಗಿರುತ್ಹೆನೆ ಎಂದು ಬಂದ ನೀನು ಕಳೆದ ದೀಪಾವಳಿಯ ಹಣತೆಗಳು ಆರಿ,ಈ ದೀಪಾವಳಿಯ ಹಣತೆಗಳು ಹೊತ್ಹುವ ಮುನ್ನವೆ
ಯಾರದೋ ಮನೆಯ ನಂದಾ ದೀಪ.ಕರಾರುಗಳೇ ಇಲ್ಲದೆ ಜೀವನದ ಹೆಜ್ಜೆ ಹೆಜ್ಜೆಗೂ ಸಾತ್ ನೀಡಿದ ಅಪ್ಪ,ಹೋಗಿ ಬರುತ್ಹೇನೆ ಎಂದು ಕೂಡ ಹೇಳದೆ ಹೊರಟು ಹೊಗಿದ್ಹಾರೆ.


ನಾಳೆ ಬೆಳಗಾದರೆ ದೀಪಾವಳಿ.ಬರುವ ಬೆಳಗನ್ನು ಹಿಡಿದಿಡಲಾರೆ.ಹಿಡಿದಿಡುವಂತಿದ್ಹರೆ ಚೆನ್ನಗೀತ್ಹು.ಇಂದು ಸಮ್ಜೆ ಒಲೆಯ ಮೇಲಿಟ್ಟ ಕಂದು ಹಸುವಿನ ಹಾಲು ಉಕ್ಕುವ ಮುನ್ನ ಅಮ್ಮನ ಕಂಗಳಲ್ಲಿ ಗಂಗೆ ಉಕ್ಕಿರುತ್ಹಾಳೆ.ಕಳೆದ ಇಪ್ಪತ್ಹಾರು ವರುಷಗಳಲ್ಲಿ ಅಪ್ಪನಿಲ್ಲದೆಯೆ ಆಚರಿಸಬೇಕಿರುವ ಮೊದಲ ದೀಪಾವಳಿ. ನಿನಗೂ ಅಷ್ಟೆ ಅಲ್ಲವೆ! ಹಬ್ಬದ ಮುಂಜಾವಿನಲ್ಲಿ ಸ್ನಾನ ಮಾಡಿಕೊಂಡು, ಹಬ್ಬಕ್ಕೆ ಹೊಸದಾಗಿ ಗಂಡ ತಂದ ಕಡುಗೆಂಪು ಸೀರೆಯನ್ನು
ಅಲ್ಮೆರಾದಿಂದ ತೆಗೆಯುವಾಗ,ಇನ್ನೆಂದೂ ಉಡಲೆಬಾರದು ಎಂದು ಸೀರೆಯ ಸಾಲಿನಲ್ಲಿ ಕೊನೆಗೆ ಇಟ್ಟ ಆ ಕಪ್ಪು ಹೂವಿನ ಗುಲಾಬಿ ಬಣ್ಣದ ಸೀರೆ ಕರುಳಲ್ಲಿ ಸಣ್ಣ ನಡುಕ ಹುಟ್ಟಿಸದೇ ಇದ್ಹೀತಾ...?ನನಗೂ ಗೊತ್ಹು ಗುಲಾಬಿ ಕೆಂಪಾಗಿದೆ.ನಿನಗೆ ಗಂಡನಿದ್ಹಾನೆ ಪೂಜೆಯ ಪರಿಕರ ಜೋಡಿಸಿಕೊಡಲು,ಕಳೆದ ದೀಪಾವಳಿಯಲ್ಲಿಲ್ಲದವನು.ನನಗೂ ಅಮ್ಮನಿದ್ಹಾಳೆ ಜೊತೆಯಾಗಿ ಪ್ರಾರ್ಥಿಸಲು.ನಾನು ಭುವಿಗೆ ಕಾಲಿಟ್ಟಾಗ ಜೊತೆಗಿದ್ಹವಳು.

ಇಂದು ,ಕಳೆದ ದೀಪಾವಳಿಯಲ್ಲಿದ್ಹ ನಾನು ನಿನ್ನ ಜೊತೆಯಲ್ಲಿಲ್ಲ,ಅಮ್ಮನ ಜೊತೆಗೆ ಅಪ್ಪನೂ ಕೂಡ.ಅಪ್ಪನಿಗೆ ಸಾವು ಬಂದು ಕದ ತಟ್ಟಿತ್ಹು.ನೀನು ಕದ ತೆರೆದು ಹೊರಟು ಹೋದೆ.

ಆದರೆ ಅಮ್ಮನ ಕಣ್ನಂಚಿನ ನೀರಿಗೂ, ನಿನ್ನ ಒಡಲಾಳದ ನಡುಕಕ್ಕು ಬಹಳ ಅಂತರವಿದೆ ಗೆಳತಿ.ದುರ್ಭರ ಬದುಕಿನ ಇಪ್ಪತ್ಹಾರು ವರುಷಗಳು ಯಾವುದೇ ಕರಾರಿಲ್ಲದೆ ನೀಡಿದ ಸಾತಗೆ ಕ್ರತಘ್ನತೆ,ನೀವಿಲ್ಲದೆ ನಾನು ನಡೆಸುವ ಅಚರಣೆ ಒಂದು ಆಚರಣೆಯಾ? ಏಂಬ ಪ್ರಶ್ನೆ, ಸಾತ್ ಇಲ್ಲದೆಯೂ ಹೆಜ್ಜೆ ತಪ್ಪದೆ ನಡೆಯಲು ಕಲಿಸಿದ್ಹಕ್ಕೆ ಧನ್ಯತೆ; ಐದಾರು ವರುಷಗಳ
ಹಿಂದೆಯೇ ಬಂದು ಕದ ತಟ್ಟಿದ್ಹ ಯಮನನ್ನ ಬಾಗಿಲಲ್ಲೆ ಕಾಯಿಸಿದ ಸಾಮಾಧಾನ,ಹೀಗೆ ಭಾವನದಿಗಳು ಬಂದು ಸೇರುವ ಪುಣ್ಯ ತೀರ್ಥ ಆ ಕಣ್ಣೀರು.

ನಿನ್ನ ಕರುಳಿನ ನಡುಕದ ಅರ್ಥ ನೀನೆ ಹುಡುಕಲಾರೆ. ಕಳೆದು ಹೋದ ಪ್ರೀತಿಯ ಮರುಭೂಮಿ ಹುಟ್ಟಿಸುವ ಭಯ,ಜೀವನದ ಮಹತ್ಹರ ತಿರುವಿನಲ್ಲಿ ದುಡಿಕಿಬಿಟ್ಟೆನಾ! ಎಂಬ ಅನುಮಾನ,ಅವನು ನಾನಿಲ್ಲದೆ ಇನ್ನೂ ಹೇಗಿರಬಹುದು? ಎಂಬ ಕುತೂಹಲ,ಗುಲಾಬಿ ಬಣ್ಣದ ಪ್ರಶಾಂತತೆ ಕಡುಗೆಂಪಿನ ಅಬ್ಬರದಲ್ಲಿಲ್ಲವಲ್ಲ ಎಂಬ ಅಸಮಾದಾನ..,ಹೀಗೆ ಹುಚ್ಹು ಹೊಳೆಗಳು ಸೇರಿ ಹುಟ್ಟಿಸಿದ ಪ್ರವಾಹ.

ಉಳಿದವುಗಳು ಏನೇ ಇರಲಿ ಈ ದೀಪಾವಳಿ ಅಮ್ಮನ ಬದುಕಿನಲ್ಲಿ ಶಾಂತಿ ನೆಮ್ಮದಿ ತರಲಿ,ಅದು ಹಾಗೆಯೆ ಇರಲಿ.ಸೀರೆಯ ಬಣ್ಣ ಯಾವುದಾದರೇನು,ಉಡುವ ಮನಸು ನಿನಗಿರಲಿ.ಗುಲಾಬಿಯೊ.... ಕೆಂಪೊ... ಬಣ್ಣ ಮಾಸದಿರಲಿ.ಮುಂದಿನ ದೀಪಾವಳಿಗೆ ತರುವ ಸೀರೆಯ ಬಣ್ಣವೂ ಕಡುಗೆಂಪೇ ಇರಲಿ.

5 comments:

Sushrutha Dodderi said...

ಎಷ್ಟೊಳ್ಳೊಳ್ಳೆ ಪ್ರತಿಮೆಗಳನ್ನ ಬಳ್ಸಿದೀರ:
"ಇಂದು ಸಂಜೆ ಒಲೆಯ ಮೇಲಿಟ್ಟ ಕಂದು ಹಸುವಿನ ಹಾಲು ಉಕ್ಕುವ ಮುನ್ನ ಅಮ್ಮನ ಕಂಗಳಲ್ಲಿ ಗಂಗೆ ಉಕ್ಕಿರುತ್ತಾಳೆ"
"ಹೊಸದಾಗಿ ಗಂಡ ತಂದ ಕಡುಗೆಂಪು ಸೀರೆಯನ್ನು ಅಲ್ಮೆರಾದಿಂದ ತೆಗೆಯುವಾಗ, ಇನ್ನೆಂದೂ ಉಡಲೇಬಾರದು ಎಂದು ಸೀರೆಯ ಸಾಲಿನಲ್ಲಿ ಕೊನೆಗೆ ಇಟ್ಟ ಆ ಕಪ್ಪು ಹೂವಿನ ಗುಲಾಬಿ ಬಣ್ಣದ ಸೀರೆ ಕರುಳಲ್ಲಿ ಸಣ್ಣ ನಡುಕ ಹುಟ್ಟದೇ ಇದ್ದೀತಾ...?"
"ಅಪ್ಪನಿಗೆ ಸಾವು ಬಂದು ಕದ ತಟ್ಟಿತ್ತು. ನೀನು ಕದ ತೆರೆದು ಹೊರಟು ಹೋದೆ."
"ಕಳೆದು ಹೋದ ಪ್ರೀತಿಯ ಮರುಭೂಮಿ ಹುಟ್ಟಿಸುವ ಭಯ... ಗುಲಾಬಿ ಬಣ್ಣದ ಪ್ರಶಾಂತತೆ ಕಡುಗೆಂಪಿನ ಅಬ್ಬರದಲ್ಲಿಲ್ಲವಲ್ಲ ಎಂಬ ಅಸಮಾಧಾನ"
......ವೋವ್! ರಿಯಲೀ ನೈಸ್! ಭುವಿ ಬಿಟ್ಟು ಹೋದ ಅಪ್ಪನ ಮಗ, ಬಾಳು ತೊರೆದು ಹೋದ ಸಂಗಾತಿಯ ಚಿತ್ರಣಗಳು ಅಮ್ಮನ ನಿಡುಸುಯ್ಯುವಿಕೆಯೊಂದಿಗೆ ಮೆಲೆತು ಅದ್ಭುತ ಹೂರಣವಾಗಿದೆ. ಥ್ಯಾಂಕ್ಸ್ ಫಾರ್ ಶೇರಿಂಗ್. ಕೀಪ್ ಅಪ್‍ಡೇಟಿಂಗ್ ದಿ ಬ್ಲಾಗ್.

ರಂಜನಾ ಹೆಗ್ಡೆ said...

ಕಾಲ ಎಲ್ಲವನ್ನು ಮರೆಸುತ್ತೆ. ಬದಲಾವಣೆಯ ಭಯ ಕಡಿಮೆ ಆಗುತ್ತೆ.ಬ್ದಲಾವಣೆ ಹೇಗೆ ಪ್ರಕೃತಿಯ ನಿಯಮವೋ ಹಾಗೆಯೆ ಅದರಿಂದ ಉಂಟಾದ ನೋವನ್ನು ಮರೆಸುವುದು ಕೂಡ ಅದರ ನಿಯಮವೇ.
ವಾಕ್ಯಗಳು ತುಂಬಾ ತುಂಬಾ ಇಷ್ಟ ಆಯಿತು.
ಸಂಗಾತಿಯನ್ನು ಕಳೆದುಕೊಂಡ ಎರೆಡು ಜೀವಗಳು.
"ನಿನ್ನ ಕರುಳಿನ ನಡುಕದ ಅರ್ಥ ನೀನೆ ಹುಡುಕಲಾರೆ" ಹುಡುಕುವ ಮನಸ್ಸು ಅವರಿಗೆ ಇರುತ್ತೋ ಇಲ್ಲವೋ? ನಡುಕ ಹುಟ್ಟುವುದೇ ಡೌಟ್.
"ಈ ದೀಪಾವಳಿ ಅಮ್ಮನ ಬದುಕಿನಲ್ಲಿ ಶಾಂತಿ ನೆಮ್ಮದಿ ತರಲಿ"
ಆ ಅಮ್ಮನ ಮಗನಿಗೂ ಶಾಂತಿ ನೆಮ್ಮದಿ ತರಲಿ. ಅವನ ಮನೆಯಲ್ಲಿ ಆರಿದ ದೀಪ ಮತ್ತೊಮ್ಮೆ ಬೆಳಗಿ ಮುಂದಿನ ದೀಪಾಳಿಗೆ ಇಷ್ಟವಾಗುವ ಬದಲಾವಣೆ ಆಗಿರಲಿ.

ಸಿಂಧು sindhu said...

ನಾಗರಾಜ್,

ಎಷ್ಟ್ ಚೆನ್ನಾಗಿ ಬರದ್ದೆ! ಇಷ್ಟ ಆತು.

ಎಲ್ಲ ದುಃಖಗಳಿಗೂ ಎರಡು ಮುಖ. ಬದಲಾವಣೆಯ ದೂರ ಮಾತ್ರ ಒಂದೇ!

ಅವಳು/ಅವನು ಅವತ್ತು ಫಸ್ಟ್ ಸಲ ಇಷ್ಟಾ ಆಗಿತ್ತಲ ಅಷ್ಟೇ ಇಷ್ಟ ಆಗ ಹಂಗೇ ಇವತ್ತೂ ಇದ್ದಿದ್ದ್ರೆ ಎಷ್ಟ್ ಚೆನ್ನಾಗಿತ್ತಲ? ಉಂಹುಂ. ನಾನೂ ಬದ್ಲಾಗಿರ್ತಿ. ಅವನೂ/ಳೂ ಆಗ್ತ. ಅಷ್ಟೆ ಅಲ್ಲದೆ ಇವತ್ತಿನ ಪರಿಸ್ಥಿತಿ ಬೇರೆ ಯಾರೂ ಯಾರಿಗೂ ಅನಿವಾರ್ಯವೇ ಅಲ್ಲ ಅಂತ ಬದುಕುವ ಯುಗ. ಬದ್ಲಾಗದೇ ಉಳಿಯದೇ ಕಷ್ಟ.

ಹೊಸದರಲ್ಲಿ ಕೆಲವು ಒಳ್ಳೆಯದು ಮಾತ್ರ ಬೇಕು ಅಂತ ಹ್ಯಾಗೆ ಬದುಕದೂ>>?
ಅವನು ಬದಲಾದ, ನಾನು ಬದಲಾಗದೆ ಹಂಗೇ ಉಳದಿ. ಹೊಂದಾಣಿಕೆ ಎಡವಿಬಿತ್ತು.
(ಅವನು) ಬದಲಾಗಿದ್ದು ತಪ್ಪಾ?(ನಾನು) ಬದಲಾಗದೇ ಇದ್ದಿದ್ದು ತಪ್ಪಾ?

ನಿನ್ನ ಬರಹವೇ ಹೀಗೆ ನೂರೆಂಟು ನೆನಪು ಹಲವಾರು ಯೋಚನೆಗಳ ಸರಮಾಲೆ ಹುಟ್ಟು ಹಾಕಿಬಿಡುತ್ತದೆ.

ಬರಹದ ವಿಷಯ ಬಿಟ್ಟು - 'ಶೈಲಿ'ಗೆ ಬಂದ್ರೆ.. ಎಷ್ಟು ಚೆನಾಗ್ ಬರದ್ದೆ? ಓದುತ್ತ ಓದುತ್ತ ನಿಮ್ಮೂರು ಹತ್ತಿರವಾಗುವಾಗ ಕಾಣುವ ಮುಳುಗಡೆಯ ನೀರಿನ ನೆನಪು. ದೀಪಾವಳಿಯ ಬೆಳಕು ಕತ್ತಲೆಗಳನ್ನು, ಹೊಸತು ಹಳತುಗಳನ್ನು, ಕಳೆಯುತ್ತಿರುವ ಕಾಲವನ್ನು ತುಂಬು ವಾಕ್ಯಗಳಲ್ಲಿ ತುಳುಕಿಸಿದ್ದೀಯ. ಓದಿ ನನ್ನ ಕಣ್ಣಲ್ಲೂ ತುಳುಕುತ್ತಿದೆ.

ನನ್ನೊಂದು ಮಾತು ನಿನಗೆ ಪ್ರೀತಿಯಿಂದ. ಹೋಗ್ಲಿ ಬಿಟ್ಟಾಕು. ಇವತ್ತಿನ ಅವಳು - she don't deserv you..
ಅವತ್ತಿನ ಅವಳು - ಯಾವತ್ತಿಗೂ ಮೆತ್ತನೆ ಪುಳಕದ ಪ್ರೀತಿಯ ನೆನಪು. ಅವಳನ್ನ ಬೆಚ್ಚಗೆ ಒಳಗೆ ಮಡಿಚಿಟ್ಟು ಬಿಡು.

ಪ್ರೀತಿಯಿಂದ
ಸಿಂಧು

Sandeepa said...

good, body!!

ಅಂತರ,
ನಾವು ಗಮನಿಸದೇ ಇದ್ರೂ ಅದು ಅಲ್ಲಿ ಇರ್ತ!?
ಗೊತ್ತಿಲ್ಲೆ!

ಇದನ್ನ ಓದಿ, ಯಾವುದೋ ಹಾಡಿನ ಸಾಲು ನೆನ್ಪಾಗ್ತಾ ಇದ್ದು..
"ನಡೆವ ದಾರಿಗು ನಡೆದ ದಾರಿಗು ಬಹಳ ಅಂತರವಿರುವುದು..."

Unknown said...

ಕಾಲಕ್ಕಿರುವ ಔಷಧೀಯ ಗುಣ ಬೇರೆ ಯಾವುದೇ ವಸ್ತುವಿಗಿಲ್ಲ ಗೆಳೆಯ. ಜೀವನದಲ್ಲಿ ಪ್ರತಿಯೊಂದಕ್ಕು ಮೊದಲ ಅನುಭವ ಇರಲೇ ಬೇಕು. ಅಪ್ಪನಿಲ್ಲದ ದೀಪಾವಳಿಯಾಗಲಿ, ಗೆಳತಿಯಿಲ್ಲದ ಹಬ್ಬವಾಗಲಿ, ಎರಡೂ ಜೀವನದ ಕಟುಸತ್ಯ.
ಪ್ರತಿ ದೀಪಾವಳಿಗೂ ನಿನ್ನ ಮತ್ತು ಅಮ್ಮನ ಕಣ್ಣಿನ ದೀಪ ಉಜ್ವಲಿಸಲಿ ಎಂದು ಹಾರೈಸುವೆ.