ಲಹರಿ

ಎಲ್ಲ ಮರೆತಿರುವಾಗ...

Tuesday, February 26, 2008

ಮರೆಯದಿರೋಣ.......

ಭವಿಷ್ಯದ ಕನಸ ಚಪ್ಪರ ಹಾಕಲೋಗಿ..
ವರ್ತಮಾನದ ಚಾಪೆಯ ತುಳಿಯದಿರೋಣ
ಇಂದಿನ ಭವಿಷ್ಯವೇ ನಾಳೆಯ ವರ್ತಮಾನ.

ಮುಗಿಲಲ್ಲಿ ಹಾರುವ ಹಕ್ಕಿಯಾಗಲೋಗಿ..
ಪುಟ್ಟ ಹೆಜ್ಜೆಗಳ ದಿಟ್ಟ ನಡಿಗೆಯ ಮರೆಯದಿರೋಣ.
ಮುಗಿಲಿಂದಿಳಿದ ದಿನ ನಿಲ್ಲಲಾಗದು, ನಡೆಯಲೇಬೇಕು.

ನಾವು ನೀವು ಮರವಾದ ದಿನ ಗಿಡ ನೆಟ್ಟ ಅಮ್ಮನ ಮರೆಯದಿರೋಣ
ಮರ ಹೆಮ್ಮರವಾದ ದಿನ ನೆರಳಿತ್ತ ಅಪ್ಪನ ಕಡೆಗಣಿಸದಿರೋಣ.
ಇಂದಲ್ಲಾ ನಾಳೆ ನಾವು ನೀವು ಅಪ್ಪ ಅಮ್ಮಂದಿರಾಗಲೇ ಬೇಕು.

ವಿಸ್ಮಯ...

ಇಲ್ಲಿ ಮನವ ತೋಯಿಸುವ ಜಡಿ ಮಳೆ.
ಅಲ್ಲೆಲ್ಲೊ ಕಣ್ಣು ಕಿರಿದಾಗಿಸುವ ಅನಂತ ಮರುಭೂಮಿ.

ಇಲ್ಲಿ
ಭುವಿಯ ಬಣ್ಣವೇ ಹಸಿರೆಂಬಂತೆ ಕಾನನ.
ಅಲ್ಲೆಲ್ಲೊ
ಬದುಕಿಗೆ ಬೇರೆ ಬಣ್ಣವಿಲ್ಲವೆನಿಸುವಂತೆ ಹೆಬ್ಬಂಡೆಗಳು.

ಇಲ್ಲಿ
ತುಂಬಿ ತುಳುಕುತ್ತಿರುವ ಸಿರಿತನ.
ಅಲ್ಲೆಲ್ಲೊ
ಕರುಳ ಹಿಂಡುವಂತಿರುವ ಬಡತನ.

ಇಲ್ಲಿ
ಕಣ್ಣೋಟಕ್ಕೆ ಏಟುಕದ ಗಗನ ಚುಂಬಿಗಳು.
ಅಲ್ಲೆಲ್ಲೊ
ನಿಂತರೆ ತಲೆಗೆಟುಕುವ ಗುಡಿಸಲ ತಾಟುಗಳು.

ಇವು, ಪ್ರವಾಸಿಗನ ಕಣ್ಣಲ್ಲಿ ವೈವಿಧ್ಯತೆ.
ಆಸ್ತಿಕನ ಭಾವಕ್ಕೆ ದೈವಲೀಲೆ.
ವಿಜ್ಞಾನಿಗೆ ಮುಗಿದ ಕೂತೂಹಲ.
ನನ್ನಂತ ಅಜ್ಞಾನಿಗೆ ಇನ್ನೂ ವಿಸ್ಮಯ.

Tuesday, February 12, 2008

ಕಾಡುವ ಪ್ರಶ್ನೆ.

ನಿಮಗೂ ಅನುಭವ ಆಗಿರಬಹುದು,ದಿನವೂ ಭೇಟಿಯಾಗುವ ನಿಮ್ಮ ಮ್ಯಾನೇಜರ್, ಆಗೊಮ್ಮೆ ಈಗೊಮ್ಮೆ ರಸ್ತೆಗಳಲ್ಲಿ ಸಿಗುವ ಪೋಲಿಸ್, ನಿಮ್ಮ ರಸ್ತೆಯ ಲೋಕಲ್ ರೌಡಿ,ಯಾವುದೊ ಗಲಾಟೆಯಲ್ಲಿ ಕಾಣಿಸಿಕೊಳ್ಳುವ ರಾಜಕಾರಣಿಯ ಮಗ, ಹೀಗೆ ಯಾರೊ ಒಬ್ಬರು ಅಥವ ಎಲ್ಲರೂ ಒಮ್ಮೆಯಾದರು ಹೀಗೆ ಕೇಳಿದ್ದಾರ?

ನಾನು ಯಾರು ಗೊತ್ತಾ...?

ನೀವೇನು ಉತ್ತರಿಸುತ್ತೀರೊ ಗೊತ್ತಿಲ್ಲ.!!ನನಗೇನೊ ಹೀಗೆ ಉತ್ತರಿಸಬೇಕು ಅನಿಸುತ್ತಿದೆ.

"ನನಗೆ ನಾನೇ ಯಾರು ಅಂತ ಗೊತ್ತಿಲ್ಲ .!!ನೀವು ಯಾರು ಅಂತ ಹೇಗ್ರಿ ಹೇಳಲಿ?

ನೋಡಿ, ನನಗೆ ನನ್ನ ಮೇಲೆ ತುಂಬ ಆಸಕ್ತಿ. ನಾನು ಯಾರು ಅಂತ ತಿಳಿದುಕೊಳ್ಳೋ ಕುತೂಹಲ. ತುಂಬ ವರುಷಗಳಿಂದಲೂ ನನಗೆ ನಾನೇ ಕೇಳಿಕೊಂಡಿರೊ ಪ್ರಶ್ನೆ ಇದು. ಇನ್ನೂ ಉತ್ತರ ಸಿಕ್ಕಿಲ್ಲ. ಹೀಗೆ ಧಿಡೀರ್ ಅಂತ ಸಿಕ್ಕಿ, ನಾನು ಯಾರು ಅಂದ್ರೆ??....ನೀವೇ ಹೇಳಿ."

"ನಾನು ಮ್ಯಾನೇಜರ್"

"ನಾನು ಏರಿಯಾ ಇನ್ಸ್ಪೆಕ್ಟರ್"

"ನಾನು ರೋಡ್ ದಾದಾ"

"ನಾನು ಎಮ್.ಎಲ್.. ಮಗ"

ಹೀಗೆ ಇವರೆಲ್ಲಾ ಹತ್ತಾರು ಉತ್ತರ ಕೊಟ್ಟು ಮುಂದೆ ಹೋಗಬಹುದು.

ಇವರೆಲ್ಲರೂ ಹೇಳಿರೋದು ಕೇವಲ ಅವರ ಪೋಸಿಷನ್ ಗಳು ಅಲ್ವಾ?

ಒಂದು ವ್ಯಕ್ತಿ ಅಂದ್ರೆ ಕೇವಲ ಒಂದು ಪೋಸಿಷನ್ನ...?

ನಾವು ಕೂಡ ಬೇರೆಯವರ ಬಗ್ಗೆ ಹೇಳೋಲ್ವ?

"ಅವನು ಬಿಡು ಡ್ರೈವರ್,"

" ಭಿಕ್ಷುಕ ಇದಾನಲ್ಲ"

"ಕೊನೆ ಅಂಗಡಿ ಚಪ್ಲಿ ಹೊಲೆಯುವವನು"

"ಮುಂಜಾನೆ ಬರೋ ಮುನಿಸಿಪಾಲಿಟಿಯವ."

ಮತ್ತದೇ....ಪೋಸಿಷನ್ನ..?

ಹೀಗೆಲ್ಲ ಅನಿಸಿದ್ಹು ಮೊನ್ನೆ ಗೆಳೆಯನೊಬ್ಬ ಎಸ್.ಎಮ್.ಎಸ್ ಕಳಿಸಿದ ಮೇಲೆ. ಅದು ಹೀಗಿತ್ತು.

“Lets never be proud nor depressed for what we are and which position we hold. Remember, after the game is over, king and the pawns go in to the same box!”

ನಿಜ.. ಅಲ್ವಾ??

ಛೇ!! ನಾಲ್ಕು ತಿಂಗಳಿಂದ ನಮ್ಮನೆ ಕೆಲ್ಸಕ್ಕೆ ಬರೊ ಹೆಂಗ್ಸಿನ ಹೆಸ್ರೇ ಕೇಳಿಲ್ವಲ್ಲಾ!! ನಾಳೆಯಾದ್ರೂ ಕೇಳಿ ತಿಳ್ಕೋಬೇಕು...

Friday, November 30, 2007

ಅಂತರ

ಬದುಕಿನ ಬದಲಾವಣೆಗಳು ಅವಶ್ಯಕ.ಅದು ಭಯ ಹುಟ್ಟಿಸುವಂತಿರದಿದ್ಹರೆ, ಗಂಟಲ ಪಸೆ ಆರಿಸುವಂತಿರದಿದ್ಹರೆ ಮಾತ್ರ ಒಪ್ಪಿಕೊಳ್ಳಬಹುದು.ಬದಲಾವಣೆ ಅಷ್ಟೂಂದು ಕ್ರೂರವಿದ್ಹರೆ,ಬದಲಾವಣೆಗೆ ದಿಕ್ಕಾರವಿರಲಿ. ನಿಂತ ನೀರಲ್ಲೆ ಬದುಕೋಣ.

ಕಳೆದ ದೀಪಾವಳಿಗೂ ಬರುವ ದೀಪಾವಳಿಗೂ ಎಷ್ಟೊಂದು ಅಂತರ.ಕಳೆದ ಹನ್ನೆರಡು ಮಾಸಗಳು ಬದುಕಿನ ಬಣ್ಣವನ್ನೇ ಬದಲಾಯಿಸಿಬಿಟ್ಟಿದೆ.ಮುರಿದ ಕನಸುಗಳು ಬದುಕಿನ ಗುರಿಯನ್ನೆ ಬದಲಾಯಿಸಲು ಹೊರಟಿವೆ.ನಡೆದು ಬಂದ ದಾರಿ ನಮ್ಮದಲ್ಲವೇನೊ ಎಂಬತೆ ತಿರುಗಿ ಮತ್ಹೆಲ್ಲೊ ಹೊರಟಿದ್ಹೇವೆ ಹತ್ಹಾರು ವರುಷಗಳು ಜೊತೆಗಿರುತ್ಹೆನೆ ಎಂದು ಬಂದ ನೀನು ಕಳೆದ ದೀಪಾವಳಿಯ ಹಣತೆಗಳು ಆರಿ,ಈ ದೀಪಾವಳಿಯ ಹಣತೆಗಳು ಹೊತ್ಹುವ ಮುನ್ನವೆ
ಯಾರದೋ ಮನೆಯ ನಂದಾ ದೀಪ.ಕರಾರುಗಳೇ ಇಲ್ಲದೆ ಜೀವನದ ಹೆಜ್ಜೆ ಹೆಜ್ಜೆಗೂ ಸಾತ್ ನೀಡಿದ ಅಪ್ಪ,ಹೋಗಿ ಬರುತ್ಹೇನೆ ಎಂದು ಕೂಡ ಹೇಳದೆ ಹೊರಟು ಹೊಗಿದ್ಹಾರೆ.


ನಾಳೆ ಬೆಳಗಾದರೆ ದೀಪಾವಳಿ.ಬರುವ ಬೆಳಗನ್ನು ಹಿಡಿದಿಡಲಾರೆ.ಹಿಡಿದಿಡುವಂತಿದ್ಹರೆ ಚೆನ್ನಗೀತ್ಹು.ಇಂದು ಸಮ್ಜೆ ಒಲೆಯ ಮೇಲಿಟ್ಟ ಕಂದು ಹಸುವಿನ ಹಾಲು ಉಕ್ಕುವ ಮುನ್ನ ಅಮ್ಮನ ಕಂಗಳಲ್ಲಿ ಗಂಗೆ ಉಕ್ಕಿರುತ್ಹಾಳೆ.ಕಳೆದ ಇಪ್ಪತ್ಹಾರು ವರುಷಗಳಲ್ಲಿ ಅಪ್ಪನಿಲ್ಲದೆಯೆ ಆಚರಿಸಬೇಕಿರುವ ಮೊದಲ ದೀಪಾವಳಿ. ನಿನಗೂ ಅಷ್ಟೆ ಅಲ್ಲವೆ! ಹಬ್ಬದ ಮುಂಜಾವಿನಲ್ಲಿ ಸ್ನಾನ ಮಾಡಿಕೊಂಡು, ಹಬ್ಬಕ್ಕೆ ಹೊಸದಾಗಿ ಗಂಡ ತಂದ ಕಡುಗೆಂಪು ಸೀರೆಯನ್ನು
ಅಲ್ಮೆರಾದಿಂದ ತೆಗೆಯುವಾಗ,ಇನ್ನೆಂದೂ ಉಡಲೆಬಾರದು ಎಂದು ಸೀರೆಯ ಸಾಲಿನಲ್ಲಿ ಕೊನೆಗೆ ಇಟ್ಟ ಆ ಕಪ್ಪು ಹೂವಿನ ಗುಲಾಬಿ ಬಣ್ಣದ ಸೀರೆ ಕರುಳಲ್ಲಿ ಸಣ್ಣ ನಡುಕ ಹುಟ್ಟಿಸದೇ ಇದ್ಹೀತಾ...?ನನಗೂ ಗೊತ್ಹು ಗುಲಾಬಿ ಕೆಂಪಾಗಿದೆ.ನಿನಗೆ ಗಂಡನಿದ್ಹಾನೆ ಪೂಜೆಯ ಪರಿಕರ ಜೋಡಿಸಿಕೊಡಲು,ಕಳೆದ ದೀಪಾವಳಿಯಲ್ಲಿಲ್ಲದವನು.ನನಗೂ ಅಮ್ಮನಿದ್ಹಾಳೆ ಜೊತೆಯಾಗಿ ಪ್ರಾರ್ಥಿಸಲು.ನಾನು ಭುವಿಗೆ ಕಾಲಿಟ್ಟಾಗ ಜೊತೆಗಿದ್ಹವಳು.

ಇಂದು ,ಕಳೆದ ದೀಪಾವಳಿಯಲ್ಲಿದ್ಹ ನಾನು ನಿನ್ನ ಜೊತೆಯಲ್ಲಿಲ್ಲ,ಅಮ್ಮನ ಜೊತೆಗೆ ಅಪ್ಪನೂ ಕೂಡ.ಅಪ್ಪನಿಗೆ ಸಾವು ಬಂದು ಕದ ತಟ್ಟಿತ್ಹು.ನೀನು ಕದ ತೆರೆದು ಹೊರಟು ಹೋದೆ.

ಆದರೆ ಅಮ್ಮನ ಕಣ್ನಂಚಿನ ನೀರಿಗೂ, ನಿನ್ನ ಒಡಲಾಳದ ನಡುಕಕ್ಕು ಬಹಳ ಅಂತರವಿದೆ ಗೆಳತಿ.ದುರ್ಭರ ಬದುಕಿನ ಇಪ್ಪತ್ಹಾರು ವರುಷಗಳು ಯಾವುದೇ ಕರಾರಿಲ್ಲದೆ ನೀಡಿದ ಸಾತಗೆ ಕ್ರತಘ್ನತೆ,ನೀವಿಲ್ಲದೆ ನಾನು ನಡೆಸುವ ಅಚರಣೆ ಒಂದು ಆಚರಣೆಯಾ? ಏಂಬ ಪ್ರಶ್ನೆ, ಸಾತ್ ಇಲ್ಲದೆಯೂ ಹೆಜ್ಜೆ ತಪ್ಪದೆ ನಡೆಯಲು ಕಲಿಸಿದ್ಹಕ್ಕೆ ಧನ್ಯತೆ; ಐದಾರು ವರುಷಗಳ
ಹಿಂದೆಯೇ ಬಂದು ಕದ ತಟ್ಟಿದ್ಹ ಯಮನನ್ನ ಬಾಗಿಲಲ್ಲೆ ಕಾಯಿಸಿದ ಸಾಮಾಧಾನ,ಹೀಗೆ ಭಾವನದಿಗಳು ಬಂದು ಸೇರುವ ಪುಣ್ಯ ತೀರ್ಥ ಆ ಕಣ್ಣೀರು.

ನಿನ್ನ ಕರುಳಿನ ನಡುಕದ ಅರ್ಥ ನೀನೆ ಹುಡುಕಲಾರೆ. ಕಳೆದು ಹೋದ ಪ್ರೀತಿಯ ಮರುಭೂಮಿ ಹುಟ್ಟಿಸುವ ಭಯ,ಜೀವನದ ಮಹತ್ಹರ ತಿರುವಿನಲ್ಲಿ ದುಡಿಕಿಬಿಟ್ಟೆನಾ! ಎಂಬ ಅನುಮಾನ,ಅವನು ನಾನಿಲ್ಲದೆ ಇನ್ನೂ ಹೇಗಿರಬಹುದು? ಎಂಬ ಕುತೂಹಲ,ಗುಲಾಬಿ ಬಣ್ಣದ ಪ್ರಶಾಂತತೆ ಕಡುಗೆಂಪಿನ ಅಬ್ಬರದಲ್ಲಿಲ್ಲವಲ್ಲ ಎಂಬ ಅಸಮಾದಾನ..,ಹೀಗೆ ಹುಚ್ಹು ಹೊಳೆಗಳು ಸೇರಿ ಹುಟ್ಟಿಸಿದ ಪ್ರವಾಹ.

ಉಳಿದವುಗಳು ಏನೇ ಇರಲಿ ಈ ದೀಪಾವಳಿ ಅಮ್ಮನ ಬದುಕಿನಲ್ಲಿ ಶಾಂತಿ ನೆಮ್ಮದಿ ತರಲಿ,ಅದು ಹಾಗೆಯೆ ಇರಲಿ.ಸೀರೆಯ ಬಣ್ಣ ಯಾವುದಾದರೇನು,ಉಡುವ ಮನಸು ನಿನಗಿರಲಿ.ಗುಲಾಬಿಯೊ.... ಕೆಂಪೊ... ಬಣ್ಣ ಮಾಸದಿರಲಿ.ಮುಂದಿನ ದೀಪಾವಳಿಗೆ ತರುವ ಸೀರೆಯ ಬಣ್ಣವೂ ಕಡುಗೆಂಪೇ ಇರಲಿ.

Friday, September 21, 2007

ವಿಪರ್ಯಾಸ

ಇಲ್ಲಿ ಹತ್ತಿರದವರೆಲ್ಲ ಬಲು ದೂರ
ದೂರದವರೆಲ್ಲ ಅಕ್ಕಪಕ್ಕದಲ್ಲೆ.

ದುಃಖ ಕವಿದಾಗ ಅಳಲಾಗದ ಜನಕ್ಕೆ
ಯಾರೋ ನಕ್ಕಾರೆಂಬ ಭಯ.
ಆದರು ಯಾರದೊ ಮಳ್ಳು ಜೋಕಿಗೆ, ಸುಳ್ಳೆ ನಗು

ಸಮೀಪದ ಸಾವಿಗೆ ಸ್ಪಂದಿಸದ ನಾವು
ಶವ ತುಂಬಿದ ರಸ್ತೆಯಲ್ಲಿ ನಿರ್ಭಾವುಕರು
ರಾತ್ರಿಯ ನೀರವತೆಯಲ್ಲಿ ಪರಿಚಯವೇ ಇಲ್ಲದ
ಪ್ರೀತಿಗೆ ಕಣ್ಣೀರ ಅರ್ಪಣೆ.

ಕೆಳಗಡೆಯ ಮನೆಯವರಿಗೆ,
ನಾವಿನ್ನು ಇಲ್ಲೆ ಎಂಬ ಹಳ ಹಳಿ
ಮೇಲಿನ ಮನೆಯವರಿಗೆ
ಬೀಳುವ ಎತ್ತರ ಅತೀಯಾಯಿತೇನೊ ಎಂಬ ಕಳವಳ.

ಗುರಿಯಿಲ್ಲದ ಗಾಣದ ಎತ್ತುಗಳಂತೆ
ಅವಿರತ ತಿರುಗುವಿಕೆಯ ನಂತರವೂ
ನಾವು ಬಂದು ನಿಲ್ಲುವುದು
ಅದೇ ಹಳೆಯ ಆರಂಭಕ್ಕೆ.

ಸುತ್ತಣ ಜನ ಜಾತ್ರೆ ನೋಡಿದರೆ
ಭಾವನೆಗಳ ಶವ ಸಂಸ್ಕಾರಕ್ಕೆ ಹೊರಟ
ಕುರುಡರೇ ನಾವು -ನೀವು?

Friday, August 17, 2007

ಕವಲು ದಾರಿಯಲ್ಲಿ...

ಯಾರು ಬರೆದರೋ, ಆ ಕೆಂಪು ನೀಲಿ ಬೋರ್ಡಿನ ಕೆಳಗೆ "A lot can happen over a Coffee" ಅಂತ.
ಅಂದು ನಿನಗಿಂತ ಮೊದಲು ಕಾಫಿ ಡೇಯಲ್ಲಿ ಕುಳಿತವನಿಗೆ ಬಂದ ಯೋಚನೆ ಇದು. ಆ ಕಾಫಿಯ ಸವಿ ಯಾರ ಬದುಕಿಗೆ ಅರ್ಥ ತಂದುಕೊಟ್ಟಿತೋ ಗೊತ್ತಿಲ್ಲ, ಆದರೆ ನನ್ನ ನಿನ್ನ ನಡುವೆ ಏನೂ ಘಟಿಸಲೇ ಇಲ್ಲವಲ್ಲೇ.
ಅಂದು ಇಳಿ ಸಂಜೆಯಲ್ಲಿ ನನ್ನ ಮೊಬೈಲ್ ರಿಂಗಿನ ಜೊತೆ ನಿನ್ನ ಹೆಸರು ಕಾಣಿಸಿದಾಗಲೇ ಅಂದುಕೊಂಡೆ ನಿನ್ನ ಈ ಕರೆ ಸಾಂಪ್ರದಾಯಕ ವಿದಾಯಕ್ಕೆಂದೆ. ಆದರೆ ಕುಳಿತು ನಿರ್ಧರಿಸಲು ಉಳಿದಿತ್ತಾದರೂ ಏನು?
ಜೀವನದ ರಸ್ತೆಯ ಕೊನೆಯಂಚಿನವರೆಗೆ ಅಥವಾ ನಾವಿಬ್ಬರೂ ಇರುವವರೆಗೆ ಜೊತೆಜೊತೆಯಾಗಿ ಕೈಹಿಡಿದು ನಡೆಯೋಣವೆಂದು ಹೊರಟವರು ನಾವು. ಯಾಕೋ ಪಯಣ ಆರಂಭಿಸುವ ಮೊದಲೇ ನಿನ್ನ ಮುಖದಲ್ಲಿ ಬೆವರಿನ ಸೆಲೆಯಿತ್ತು.
ಕಲ್ಲು ಮುಳ್ಳುಗಳ ರಸ್ತೆ ನನಗಲ್ಲ, ಆದರೆ ನೀನು ಮಾತ್ರ ಬೇಕು, ರಸ್ತೆ ಬದಲಿಸೋಣ ಅಂದು ಬಿಟ್ಟೆ.ಅದು ಹೇಗಾದೀತು? ಕಲ್ಲಿರಲಿ ಮುಳ್ಳಿರಲಿ ಅದು ನನ್ನ ಕನಸಿನರಮನೆಗೆ ಕೊಂಡೊಯ್ಯುವ ದಾರಿ. ಬಿಟ್ಟು ಹೇಗೆ ಬರಲಿಕ್ಕಾದೀತು ಹೇಳು.
ನನಗೆ ನೀನು ಬೇಕಿತ್ತು, ನಿನಗೆ ನಾನು. ರಸ್ತೆಗಳ ಗೊಡವೆ ನಮಗೆ ಬೇಕಿರಲಿಲ್ಲ. ಆದರೆ ನಿಂತಲ್ಲೇ ನಿಲ್ಲಲಾಗದಲ್ಲಾ? ನೀನೇ ಹೇಳಿದ್ದು, ನಾನು ಪಕ್ಕದ ದಾರಿಯಲ್ಲಿ ಬರುತ್ತೇನೆ, ಜೊತೆಯಾಗಿಯೇ ಎಂದು. ಸರಿ ದಾರಿ ಬೇರೆಯಾದರೇನು ಜೊತೆಜೊತೆಯಾಗಿಯೇ ಹೋಗೋಣ ಕೈಕೈ ಹಿಡಿದು ನಡೆಯಲಾಗದು, ಆದರೆ ಕೈಬಿಟ್ಟು ನಡೆಯ ಬೇಡ ಅಂದಿದ್ದೆ ನಾನು.
ನಾನು ನಂಬಿದೆ, ಎಷ್ಟೋಂದು ಹಗಲಿರುಳುಗಳು ಜೊತೆಜೊತೆಯಲ್ಲಿ ಬೇರೆ ಬೇರೆ ದಾರಿ, ಒಂದೇ ಗಮ್ಯ.
ಮೊಂದೊಂದು ತಿರುವಿನಲ್ಲಿ ಮತ್ತೆ ಕೈ ಹಿಡಿಯುತ್ತೀಯ ಎಂಬ ಪುಟ್ಟ ಆಸೆಯೊಂದೇ ಹೆಜ್ಜೆಯಿಡುವಂತೆ ಪ್ರೆರೇಪಿಸುತ್ತಿದ್ದುದು. ಪ್ರತಿಯಿರುಳೂ ನನಗೆ ಕಳವಳ, ಕತ್ತಲ ದಾರಿಯಲ್ಲಿ ಎಲ್ಲಿ ಕಳೆದುಹೋದೆಯೋ ಎಂದು. ನನ್ನ ಹೆಜ್ಜೆ ಬಿರುಸಾದರೂ ನಿನ್ನ ಹೆಜ್ಜೆ ನಿಧಾನವಾದರೂ ಕಳೆದು ಹೊಗುತ್ತಿದ್ದುದು ನಾವಿಬ್ಬರು. ಬರುವ ನಾಳೆಯಲ್ಲಿ ಭರವಸೆಯಿಟ್ಟು ಇಡುವ ಹೆಜ್ಜೆಗೆ ಆನೆ ಬಲ.
ಬದುಕಿನ ಯಾವುದೋ ತಿರುವಿನಲ್ಲಿ ನೀನು ರಸ್ತೆ ಬದಲಿಸಿದ್ದು ನನಗೆ ಅರಿವಾಗಲೇ ಇಲ್ಲ. ಒಂದು ಸುಂದರ ಮುಂಜಾವಿನಲ್ಲಿ ಕಣ್ತೆರೆದವನಿಗೆ ತಿಳಿದಿದ್ದು ಪಕ್ಕದ ರಸ್ತೆಯಲ್ಲಿ ನೀನಿಲ್ಲ. ನನಗೆ ಗೊತ್ತು ನಿನ್ನ ಹೆಜ್ಜೆಯ ಗತಿ, ನನಗಿಂತ ಮುಂದೆ ಹೋಗಿರಲಾರೆ, ನಿನ್ನವು ಪುಟ್ಟ ಪುಟ್ಟ ಹೆಜ್ಜೆಗಳು. ಎಲ್ಲದರೂ ಮುನಿಸಿಕೊಂಡು ಕುಳಿತಿರಬಹುದೇ ಎಂದು ಅದೇ ತಿರುವಿನಲ್ಲಿ ಕಾದು ಕುಳಿತವನಿಗೆ ನೀನು ಕಾಣಿಸಿದ್ದು ಬಹು ದಿನಗಳ ನಂತರ.
ನಿನ್ನ ನಡಿಗೆ ನಿಧಾನವಾಗಿದ್ದರೆ, ಮುನಿಸಿಕೊಂಡು ಎಲ್ಲೋ ಕುಳಿತಿಕೊಂಡಿದ್ದರೆ ಬೇಸರವಿರಲಿಲ್ಲ. ಅಂದು ನೀನು ಒಬ್ಬಳೆ ಬರಲಿಲ್ಲ, ಜೊತೆಯಲ್ಲಿ ಅವನಿದ್ದ.
ಇನ್ನು ಅವನಿರುವವರೆಗೆ ನಿನ್ನಜೊತೆ ನಡೆಯಲಾರೆ, ನಿನ್ನ ರಸ್ತೆಯಲ್ಲಿಯೂ ಕೂಡಾ. ಆದರೆ ನೀನಿಲ್ಲದೇ ನಾನೆಡೆಯಲಾರೆ ನನ್ನ ರಸ್ತೆಯಲ್ಲಿಯೂ. ನಿರ್ಧರಿಸಿಯಾಗಿದೆ ನೀನು ನನಗೆ ಬೇಕೇ ಬೇಕು. ನನ್ನದೇ ಕಲ್ಲು ಮುಳ್ಳು ರಸ್ತೆಯಲ್ಲಿ ನಿನಗಿಂತ ನಿಧಾನವಾದರೂ ಕೂಡಾ ನಡೆದು ಬಂದೇ ಬರುತ್ತೇನೆ, ನೀನು ಮುಂದಾವುದೋ ತಿರುವುನಲ್ಲಿ ನನಗಾಗಿ ಕಾಯಬಹುದು ಎಂಬ ಪುಟ್ಟ ಹಣತೆ ಹೊತ್ತಿಸಿಕೊಂಡು. ನನಗೆ ಗೊತ್ತು ನೀನು ಅವನೊಂದಿಗೆ ಬಹಳ ದೂರ ನಡೆಯಲಾರೆ, ನಿನ್ನ ಪ್ರೀತಿಯ ಮೇಲೆ ಕಿಂಚಿತ್ತೂ ಅನುಮಾನವಿಲ್ಲ, ಆದರೆ ಅವನ ದ್ರೋಹದ ಬಗ್ಗೆ ವಿಶ್ವಾಸ ಅಷ್ಟೆ.
ನನ್ನ ದಾರಿ ನಿನ್ನ ದಾರಿಯಹಾಗೆ ಸುಗಮವಲ್ಲ, ಅದಕ್ಕೇ ಅಲ್ಲವೇ ನೀನು ಪಕ್ಕದ ದಾರಿ ಆಯ್ದುಕೊಂಡದ್ದು. ತಡವಾಗಿಯಾದರೂ ಬಂದೇ ಬರುತ್ತೇನೆ ಬದುಕಿನ ಆ ತಿರುವಿಗೆ.
ನನಗಾಗಿ ನೀನು ಕಾಯಬೇಕಷ್ಟೆ. ಒಬ್ಬಳೇ..